ಜಾನಪದ ಮತ್ತು ಪುರಾಣ - 
ಜನಪದ ಕಥೆಗಳ ಪ್ರಕಾರಗಳಲ್ಲಿ ಪುರಾಣಗಳು (ಮಿತ್ಸ್), ಐತಿಹ್ಯಗಳು (ಲೆಜೆಂಡ್ಸ್) ಹಾಗೂ ಮನೋರಂಜಕ ಕಥೆಗಳು ಎಂಬ ಮೂರು ಭಾಗಗಳನ್ನು ಮಾಡಬಹುದು. ತೀರ ಪ್ರಾಚೀನ ಕಾಲವಾದ ಮಾನವರು ನಿಸರ್ಗದೊಡನೆ ಹೋರಾಟಮಾಡಿ ಬದುಕುತ್ತಿದ್ದರು. ಆಗ ಅವರು ನಿಸರ್ಗವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಮಾಟದ ವಿಧಾನಗಳನ್ನು ಅವಲಂಬಿಸಿ ಕೆಲವು ವಿಧಿಕ್ರಮಗಳನ್ನು (ರಿಚ್ಯುಯಲ್ಸ್) ಬಳಕೆಯಲ್ಲಿ ತಂದಿದ್ದರು. ಅವುಗಳಲ್ಲಿ ಆಚರಣೆಯ ಭಾಗಗಳೂ ಆ ಆಚರಣೆಗಳಲ್ಲಿ ಹೇಳುತ್ತಿದ್ದ ಸಾಹಿತ್ಯ ಭಾಗವೂ ಸೇರ್ಪಡೆ ಹೊಂದಿದ್ದವು. ಇವುಗಳಿಂದಲೇ ಈ ಮೂರೂ ತರದ ಕಥೆಗಳ ವಿಕಾಸವಾಯಿತು ಎಂದು ವಿದ್ವಾಂಸರ ಅಭಿಪ್ರಾಯ.

ಗವಿಮಾನವ ಬರೆದ ಚಿತ್ರಗಳಲ್ಲಿ ಅವನ ಮಾಟದ ವಿಧಿಕ್ರಮಗಳ ಅರ್ಥವಿದೆ ಎಂದು ಎನ್.ಜೆ.ಬೆರಿಲ್ ಎಂಬ ವಿದ್ವಾಂಸ ಹೇಳುತ್ತಾನೆ. ತಲೆ ಮತ್ತು ಬಾಲವುಳ್ಳ, ಚಿಗರೆಯ ಕೋಡುಗಳ ಮುಖವಾಡವುಳ್ಳ ಮನುಷ್ಯನ ಚಿತ್ರದಲ್ಲಿ ಮ್ಯಾಮತ್ ಎಂಬ ಕೂದಲುಳ್ಳ ಪ್ರಾಚೀನ ಆನೆಗಳನ್ನೂ ಹಿಮಸಾಗರಗಳನ್ನೂ ಬೇಟೆಯಾಡುತ್ತಿದ್ದ ಮಾನವರ ಕಲ್ಪನೆಯಲ್ಲಿನ ದೆವ್ವದ ಉಗಮವನ್ನು ಕಾಣಬಹುದು. ಮೂಲತಃ ಈ ಚಿತ್ರದಲ್ಲಿನ ಮಾಟಗಾರ ಆಮೇಲೆ ಕ್ರಿಶ್ಚನ್ ಧರ್ಮದಲ್ಲಿಯ ದುಷ್ಟಶಕ್ತಿಯಾದ ಸೇಟನ್ ಎಂದು ಕರೆಯಿಸಿಕೊಂಡ. ಗ್ರಿಮ್ ಸೋದರರ ಜನಪದ ಕಥೆ ಮೂರು ಚಿನ್ನದ ಕೊದಲುಳ್ಳ ದೆವ್ವ ಎಂಬುದರಲ್ಲೂ ಇತರ ಹಲವು ದೇಶಗಳ ಜನಪದ ಕಥೆಗಳಲ್ಲಿಯೂ ದೆವ್ವಗಳ ಹಾಗೂ ಇತರ ದುಷ್ಟಶಕ್ತಿಗಳ ಹಾವಳಿಯನ್ನು ಕಾಣಬಹುದು.
ಪುರಾಣಗಳು ಸೃಷ್ಟಿಯ ಉಗಮ, ಆಕಾಶದ ಗ್ರಹ ತಾರೆಗಳು ಹಾಗೂ ಸ್ವರ್ಗ ನರಕಗಳು ಮತ್ತು ಅಂಥ ಇತರ ವಿಷಯಗಳನ್ನು ಹೇಳುತ್ತವೆ. ದೇವತೆಗಳ ಕಾರ್ಯಗಳನ್ನೂ ಅದ್ಭುತ ಅಸಂಭಾವ್ಯ ರೀತಿಗಳಿಂದ ಹೇಳುವ ಈ ಕಥೆಗಳು ವಿಧಿಕ್ರಮದಿಂದ ವಿಕಾಸಹೊಂದಿ, ಹಲವಾರು ಜನಪದ ಕಥೆಗಳಿಗೆ ಪ್ರೇರಕವೂ ಪೋಷಕವೂ ಆಗುತ್ತವೆ. ದೇವತೆಗಳ ಶಕ್ತಿಯನ್ನು ಪೋಷಿಸಲು ರಕ್ತಬಲಿ ಅವಶ್ಯವೆಂಬ ಕಲ್ಪನೆಯಿತ್ತು. ಪವಿತ್ರರಾಜನನ್ನೇ ಬಲಿಕೊಟ್ಟು, ರಾಜನ ದೇವತ್ವದ ಶಕ್ತಿಯನ್ನು ಕಾಪಾಡುವ ಹಾಗೂ ಇತರ ನರಬಲಿಗಳನ್ನೂ ಪ್ರಾಣಿಬಲಿಗಳನ್ನೂ ಕೊಡುವ ನಂಬಿಕೆಗಳೂ ಸಂಪ್ರದಾಯಗಳೂ ಅದ್ಭುತ ಶಕ್ತಿಗಳನ್ನು ಗಳಿಸಬೇಕೆಂಬ ಉದ್ದೇಶದಿಂದ ಬಲಿಕೊಡುವ ಹಲವಾರು ಧಾರ್ಮಿಕ ವಿಧಾನಗಳಲ್ಲಿಯೂ ಪುರಾಣ ಹಾಗೂ ಜಾನಪದಕಥೆಗಳಲ್ಲಿಯೂ ಕಾಣುತ್ತವೆ. ತಮಿಳು ಅಪೂರ್ವಚಿಂತಾಮಣಿ ಎಂಬ ಕಥಾನಕದಲ್ಲಿ ಬರುವ ಸಹಸ್ರಶಿರಶ್ಛೇದ ಮಾಡಲು ಹವಣಿಸುವ ಮಾಂತ್ರಿಕನ ಹವ್ಯಾಸಗಳು ಇದರ ಅತ್ಯುಕ್ತಿಯ ರೂಪಕ್ಕೆ ಒಂದು ಉದಾಹರಣೆ.

ಜಗತ್ತಿನಲ್ಲೆಲ್ಲ ಪ್ರಸಿದ್ಧವಾದ ಸಿಂಡ್ರೆಲ ಕಥೆಯಲ್ಲಿ ಹಲವಾರು ಪಾಠಭೇದಗಳು ಕಂಡರೂ ಮೂಲದಲ್ಲಿ ಆ ಕಥೆಯ ವಸ್ತುವೂ ವಿವರಗಳು ವಿಧಿಕ್ರಮದ ಆಚರಣೆಯಿಂದ ಟಿಸಿಲೊಡೆದವು. ಸಿಂಡ್ರೆಲ ಬಹುಶಃ ಬೇಸಗೆಯ ರಾಣಿ. ಚಳಿಗಾಲದಿಂದ ದಬ್ಬಲ್ಪಟ್ಟ ಅವಳು ಗಂಧರ್ವದೇವತೆಯ ಸಹಾಯದಿಂದ ಬೇಸಗೆಯ ಹಬ್ಬದಲ್ಲಿ ರಾಜಕುಮಾರನನ್ನು ಸಂಧಿಸುತ್ತಾಳೆ. ಆ ರಾಜಕುಮಾರ ವಿಧಿಕ್ರಮದಲ್ಲಿನ ಪವಿತ್ರರಾಜನೇ.

ರಾಬಿನ್ ಹುಡ್ಡನ ಕಥೆಯನ್ನು ವಿಧಿಕ್ರಮದ ಕಥೆಯೆಂದೂ ಐತಿಹ್ಯದ ಕಥೆಯೆಂದೂ ಬೇರೆಬೇರೆಯವರು ಬೇರೆಬೇರೆಯಾಗಿ ಅರ್ಥಮಾಡುತ್ತಾರೆ. ದೇಶ ಬಾಹಿರನಾದ ಹಂಟಿಂಗ್‍ಟನ್‍ನ ಅರ್ಲ ರಾಬಿನ್‍ಹುಡ್ ಫಿಟ್‍ಜೂಟ್ ಎಂಬವನೆನ್ನುತ್ತಾರೆ. ಆದರೆ ಮೇ ತಿಂಗಳಿನ ಋತುಮಾನದ ಹಬ್ಬ ಆ ವ್ಯಕ್ತಿಯಿದ್ದ ಕ್ರಿ.ಶ.1200ಕ್ಕಿಂತ ಹಳೆಯದು. ಪೇಗನರೆಂದು ಕ್ರಿಶ್ಚನರಿಂದ ಕರೆಯಲ್ಪಡುವ, ಕ್ರಿಸ್ತ ಪೂರ್ವ ಕಾಲದ ಧಾರ್ಮಿಕ ಆಚರಣೆ ಮಾಡುತ್ತಿದ್ದ ಜನರ ಹಳೆಕಾಲದ ರಾಬಿನ್ ಹುಡ್ಡನ ದಿನದ ಹಬ್ಬ ಮೇ ದಿನಗಳ ವನಸ್ಪತಿಯ ಉತ್ಸವಕ್ಕೆ ಸಂಬಂಧಿಸಿದ್ದು. ಈ ಹೆಸರಿನಲ್ಲಿನ ಹುಡ್ ಎಂದರೆ ವುಡ್=ಅಡವಿ. ಐತಿಹ್ಯದ ರಾಬಿನ್ ಹುಡ್ ಎಂಬವನೊಬ್ಬನಿದ್ದರೂ ಅವನ ಕಥೆ ಈ ಮೂಲಕಥೆಯೊಡನೆ ಸೇರಿ ಬೆಳೆದು ಬಂದಿದೆ.
ಗಾಳಿ, ಸಮುದ್ರ, ಬೆಂಕಿ ಇತ್ಯಾದಿ ನೈಸರ್ಗಿಕ ಶಕ್ತಿಗಳು ಮಾನವನ ರೂಪದ ಆದರೆ ಮಾನವನಿಗಿಂತ ಹೆಚ್ಚು ಶಕ್ತಿಯುಳ್ಳ ದೇವತೆಗಳೆಂದು ಕಂಡು ಆರಾಧಿಸಿದುದರಿಂದ ಹಲವಾರು ಬಗೆಯ ಪುರಾಣಗಳು ಹುಟ್ಟಿದವು. ಧಾರ್ಮಿಕ ಅಥವಾ ಮಾಟದ ವಿಧಿಯ ಮಾತಿನ ಭಾಗವೇ ಪುರಾಣ. ಇಂದಿಗೂ ಅನೇಕ ಪ್ರಾಕ್ತನ ಮಾನವರು ಇಂಥ ಆಚರಣೆಗಳನ್ನು ನಡೆಸುತ್ತಾರೆ. ಸೂರ್ಯ, ಕತ್ತಲೆಯ ರಾಕ್ಷಸರನ್ನು ಸೋಲಿಸಿ ಓಡಿಸುತ್ತಾನೆ ಎಂಬ ಪುರಾಣಕಥೆ ರಾಜ ಚಿನ್ನದ ರಥವನ್ನೇರಿ ರಾಕ್ಷಸರ ವೇಷದಲ್ಲಿದ್ದ ಮನುಷ್ಯರನ್ನು ಓಡಿಸುವ ವಿಧಿಕ್ರಮದೊಡನೆ ಸೇರಿಕೊಂಡು ಬಂದಿತ್ತು. 

ಪ್ರಾಚೀನ ಯಕ್ಷಿಣಿ ಕಥೆಗಳಲ್ಲಿ ಅನೇಕ ಅರ್ಧ ಮರೆತಂಥ ಅಥವಾ ತಪ್ಪು ತಿಳುವಳಿಕೆಯಿಂದ ಹೊಸರೂಪ ತಳೆದಂಥ ಪ್ರಾಚೀನ ಪುರಾಣಗಳ ಮುರುಕು ಚೂರುಗಳು ಎಂಬ ವಿಲಿಯಂ ಗ್ರಿಮ್‍ನ ಅಭಿಪ್ರಾಯವನ್ನೂ ಮ್ಯಾಕ್ಸ್ ಮುಲರ್ ಸಮರ್ಥಿಸಿದ್ದಾನೆ.

ಪುರಾಣಕಥೆಗೂ ಇತರ ಜನಪದ ಕಥೆಗಳಿಗೂ ಮುಖ್ಯ ವ್ಯತ್ಯಾಸವೆಂದರೆ, ಪುರಾಣಕಥೆಗಳು ನಿಜವಾಗಿ ನಡೆದವು ಎಂಬ ನಂಬಿಕೆ ಅಥವಾ ಅರೆನಂಬಿಕೆ ಜನಾಂಗಗಳಲ್ಲಿದ್ದುದು. ಪುರಾಣಕಥೆಗಳು, ಹಿಂದಿನ ಕಾಲದ ಐತಿಹ್ಯಗಳು, ಪ್ರಾಣಿಕಥೆ, ಯಕ್ಷಿಣಿಕಥೆ, ವೀರ ಅಥವಾ ಅದ್ಭುತರಮ್ಯಕಥೆಗಳಲ್ಲಿನ ರಾಕ್ಷಸರೂ ಜರ್ಮನ್ನರ ಗ್ನೋಮ್‍ಗಳೂ ಐರ್ಲೆಂಡಿನವರ ಕುಳ್ಳಜನರೂ ಆರ್ಥರನ ರಮ್ಯಕಥೆಯ ಘಟಸರ್ಪಗಳೂ ವೀರಯೋಧರೂ (ನೈಟ್‍ಗಳು) ಹಸಿರುದ್ವೀಪ (ಐರ್ಲೆಂಡ್) ಹಾಗೂ ಯೂರೋಪಿನ ಜನರ ದೇವತೆಗಳೂ ರಾಕ್ಷಸರೂ ಆಗಿದ್ದರು. ಹಾಗೆಯೆ ಪ್ರಾಕ್ತನ ಅರಬರ ದೇವತೆಗಳು ಇಸ್ಲಾಮಿನ ಕಥಾಜಗತ್ತಿನಲ್ಲಿ ಜಿನ್ ಎಂದು ಕರೆಯಲ್ಪಟ್ಟಿದ್ದಾರೆ. ಷೇಕ್ಸ್‍ಪಿಯರನ ಕಿಂಗ್ ಲಿಯರ್ ಎಂಬ ಶ್ರೇಷ್ಠ ದುರಂತ ನಾಟಕಕ್ಕೆ ಮೂಲವಸ್ತುವಾದ ಒಂದು ಇಂಗ್ಲಿಷ್ ಜನಪದ ಕಥೆಯ ಲಿಯರ್ ಲೇರ್ ಲಿರ್ ಎಂಬ ಸಮುದ್ರದ ದೇವತೆ. ಈ ಕಥೆ ಜಾನಪದದಲ್ಲಿ ಸುಖಾಂತವಾಗಿದೆ. ಪರ್ಸಿಯಸ್ ಮತ್ತು ಆಂಡ್ರೊ ಮೀಡ ಹಾಗೂ ರಾಕ್ಷಸ ಸಂಹಾರಕ ಜ್ಯಾಕ್ ಎಂಬ ಐತಿಹ್ಯಗಳೂ ಇತರ ಅನೇಕ ಮಕ್ಕಳ ಕಥೆಗಳೂ ಪುರಾಣಕಥೆಗಳ ಪುನಃ ಸೃಷ್ಟಿಗಳಾಗಿವೆ.

ಗ್ರಿಮ್ ಸೋದರರು ಸಂಗ್ರಹಿಸಿದ ಕಪ್ಪೆರಾಜನಕಥೆಯೂ ಸೂರ್ಯನ ಕಥೆಯೇ ಎಂದು ಮ್ಯಾಕ್ಸ್ ಮುಲರ್ ಬರೆದಿದ್ದಾನೆ. ಸೂರ್ಯನಿಗೆ ಕಪ್ಪೆ ಎಂಬ ಹೆಸರು ಋಗ್ವೇದದಲ್ಲಿದೆ. ಪಂಜಾಬಿನ ಭೇಕಿಯ ಕಥೆಯೂ ಸೂರ್ಯನ ಕಥೆಯೇ ಎಂದು ಆತನ ಭಾವನೆ. ಇದಕ್ಕೆ ಆಧಾರವಾಗಿ ಅನೇಕ ಜನಾಂಗಗಳಲ್ಲಿ ಸೂರ್ಯನನ್ನು ಹೆಣ್ಣು ಎಂದು ಕಲ್ಪಿಸಿದುದನ್ನು ಆತ ಉಲ್ಲೇಖಿಸಿದ್ದಾನೆ.

ಪ್ರಾಚೀನಕಾಲದ ಈಜಿಪ್ಟಿನ ಕಥೆ ಇಬ್ಬರು ಸೋದರರು ಎಂಬುದು ಓಸಿರಿಸ್‍ನ ಪುರಾಣ ಕಥೆಗೆ ಸಂಬಂಧಿಸಿದ ಜನಪದ ಕಥೆ. ಅವರಲ್ಲಿ ಒಬ್ಬ ಅನ್ಪು. ಅವನು ಈಜಿಪ್ಟಿನ ಅನುಬಿಸ್ ಎಂಬ ದೇವತೆಯೆಂದು ಊಹೆ. ಇನ್ನೊಬ್ಬ ಬಟು. ಆತ ಪ್ಲಾಹ್ ಅಥವಾ ಸೆಟ್ ಕತ್ತಲೆಯ ಪ್ರತೀಕ. ಅನ್ಪು ಅಥವಾ ಅನುಪನ ಹೆಂಡತಿ ಬಟುವನ್ನು ಮೋಹಿಸುತ್ತಾಳೆ. ಬಟುವಿನ ಮೇಲೆ ಅಪವಾದ ಹಾಕುತ್ತಾಳೆ. ಬಟುವಿನ ಸಾವು ಮತ್ತು ಪುನರುಜ್ಜೀವನ ಇತ್ಯಾದಿಗಳಲ್ಲಿ ಮಾತಾಡುವ ಆಕಳು, ಪಾಲಿಫರನ ಹೆಂಡತಿ ಮುಂತಾದ ಜನಪದ ಕಥೆಗಳ ಆಶಯಗಳಿವೆ. 

ಅನೇಕ ಪುರಾಣ ಕಥೆಗಳಲ್ಲಿಯೂ ಐತಿಹ್ಯಗಳಲ್ಲಿಯೂ ಘಟಸರ್ಪವನ್ನು ವೀರನೊಬ್ಬ ಕೊಲ್ಲುವ ಕಥೆಗಳಿವೆ. ಉದಾಹರಣೆಗೆ ಗ್ರೀಕರ ಪರ್ಸಿಯಸ್, ಹೆರಾಕ್ಲಿಸ್, ಅಪೊಲೊ, ಜರ್ಮನರ ಸೀಗ್ ಫ್ರಿಟ್, ಇಂಗ್ಲಿಷರ ಬ್ಯೂವುಲ್ಫ್, ಅರ್ಥರ್ ಇತ್ಯಾದಿ. ಘಟಸರ್ಪಸಂಹಾರಕನ ಜನಪದ ಕಥೆಗಳಲ್ಲಿ ಘಟಸರ್ಪನಿಗೆ ಹೆಣ್ಣಿನ ಬಲಿ ಕೊಡುವ ಕಥೆ ಅತ್ಯಂತ ಹಳೆಯದು.

ಜಾನಪದದಲ್ಲಿ ಚಿನ್ನದ ಕೂದಲಿನ ಹೆಣ್ಣಿನ ಕಥೆ, ಚಿನ್ನದ ಬಾಣ, ಖಡ್ಗ, ಚಿನ್ನದ ಬಣ್ಣದ ನಿಲುವಂಗಿ ಇತ್ಯಾದಿ ಬರುವವಷ್ಟೆ. ಅಲ್ಲೆಲ್ಲ ಸೂರ್ಯನ ಕಿರಣಗಳ ಸಂಕೇತವನ್ನು ವಿದ್ವಾಂಸರು ಕಂಡುದುಂಟು. ಗ್ರೀಸಿನ ಈಡಿಪಸ್ ರಾಜ, ಪ್ಯಾರಿಸ್ ರಾಜಕುಮಾರ, ಇರಾನಿನ ರಾಜ, ಸಾಯಿರಸ್ ಇವರೆಲ್ಲ ಸೂರ್ಯನ ಪ್ರತಿನಿಧಿಗಳೇ ಆಗಿರುವಂತೆ, ಸಿಂದಬಾದನ ಪ್ರಯಾಣ ಕುರಿತಾದ ಅರೇಬಿಯನ್ ನೈಟ್ಸ್ ಕಥೆ ಸೂರ್ಯಪುರಾಣವೇ ಆಗಿದೆ ಎಂದು ಅವರ ಅಭಿಪ್ರಾಯ. ಆದರೆ ಈ ಪ್ರಕಾರದ ಹಟ ಸಮಂಜಸವಲ್ಲ. ಜನಪದ ಕಥೆಗಳು ಹೆಚ್ಚು ಹಳೆಯ ಐತಿಹ್ಯಗಳ ಪುನಃಸೃಷ್ಟಿಗಳಾಗಿವೆಯಾದರೂ ಅದ್ಭುತ ಕಥೆಗಳನ್ನು ಕುರಿತು ಸಾರ್ವತ್ರಿಕ ಅಭಿರುಚಿ ರೂಪುಗೊಂಡ ಮೇಲೆ ಅಜ್ಜಿಯರು ಕಥೆ ಹೇಳುವ ಕಾಲದಲ್ಲಿ ಹೊಸ ಕಥೆಗಳನ್ನು ಬಹುಸಂಖ್ಯೆಯಲ್ಲಿ ನಿರ್ಮಿಸಿದರು. ಈ ಶುದ್ಧ ಕಾಲ್ಪನಿಕ ಕಥೆಗಳಲ್ಲಿ ಸಹ ಐತಿಹ್ಯಕಥೆಗಳಿಗೆ ಸಾಮ್ಯಗಳನ್ನು ಹುಡುಕಬಹುದು ಎಂದು ಮ್ಯಾಕ್ಸ್ ಮುಲರ್ ಬರೆದುದುಂಟು. ಪುರಾಣಕಥೆಗಳನ್ನು ಸೃಷ್ಟಿಸಿದ ಮಾನವನ ಮನಸ್ಸಿನ ನಂಬಿಕೆಯೇ ಜನಪದ ಕಥೆಗಳ ಸೃಷ್ಟಿಗೂ ಕಾರಣವಾಗಿದೆ. ಜನಪದ ಕಥೆಗಳು ಪುರಾಣಗಳಲ್ಲಿ ಸೇರುತ್ತವೆ. ಪುರಾಣಕಥೆಗಳಿಂದ ಹೊಸ ಜನಪದ ಕಥೆಗಳ ನಿರ್ಮಾಣಕ್ಕೆ ಪ್ರಚೋದನೆ ದೊರೆಯುತ್ತದೆ.

ಆಧುನಿಕ ಗ್ರೀಕ್ ಜನಪದ ಕಥೆಗಳಲ್ಲಿಯೂ ಈಗ ಜನ ನಂಬದಿರುವ ಅಪೊಲೊ ಹರ್ಮೀಸ್ ಇತ್ಯಾದಿ ಗ್ರೀಕ್ ಪುರಾಣ ಕಥೆಗಳ ದೇವತೆಗಳು ಪಾತ್ರ ವಹಿಸುತ್ತವೆ. ಭಾರತೀಯ ಪುರಾಣಗಳ ಅಪ್ಸರೆಯರೂ ಭೂತಗಳೂ ನಾಗರೂ ನಾಗಕನ್ಯೆಯರೂ ರಾಕ್ಷಸರೂ ಯಕ್ಷರೂ ಬೇತಾಳಗಳೂ ಪ್ರಾಚೀನ ಕಥಾ ಸರಿತ್ಸಾಗರ ಇತ್ಯಾದಿಗಳಲ್ಲಿ ಬಂದಂತೆ ಆಧುನಿಕ ಜನಪದ ಕಾವ್ಯ ಹಾಗೂ ಕಥೆಗಳಲ್ಲಿಯೂ ಬರುತ್ತಾರೆ. 
ವಿನಾಶಕಾರಿಯಾದ ಮಾತೃದೇವತೆಯ ಕಲ್ಪನೆಯನ್ನು ಯೂಂಗ್ ವಿಚಾರ ಮಾಡಿದ್ದಾನೆ. ಗ್ರೀಸಿನ ಪುರಾಣ ಪ್ರಾಣಿ ಸ್ಫಿಂಕ್ಸ್ (ಹೆಂಗಸಿನ ತಲೆ, ಸಿಂಹದ ದೇಹ, ಸರ್ಪದ ಬಾಲ ಹಾಗೂ ಗರುಡನ ರೆಕ್ಕೆಗಳುಳ್ಳ ಪ್ರಾಣಿ) ಸಹ ಭೀಕರ ಮಾತೃದೇವತೆಯ ಪ್ರತೀಕ. ಜ್ಯೂಸ್ ದೇವನನ್ನು ಮೋಹಿಸಿದ ಲಾಮಿಯಾಳು ಸತ್ತ ಶಿಶುಗಳಿಗೆ ಜನ್ಮ ಕೊಡುವಂತೆ, ಹೀರಾದೇವಿ ಮಾಡಿದ್ದರಿಂದ ಅವಳು ಶಿಶುಗಳನ್ನು ನಾಶ ಮಾಡುವ ಭೀಕರ ರಾತ್ರಿದೇವತೆಯಾಗುತ್ತಾಳೆ. ಅನೇಕ ಜನಪದ ಕಥೆಗಳಲ್ಲಿ ಜನರನ್ನೂ ಪ್ರಾಣಿಗಳನ್ನೂ ತಿನ್ನುವ ರಾಕ್ಷಸಿ ಮಾತೆಯ ಆಶಯಗಳುಂಟು.

ಗ್ರೀಕರ ಪುರಾಣ ಕಥೆಗಳನ್ನು ಹೋಮರನ ಈಲಿಯಡ್ ಮತ್ತು ಆಡಿಸಿ ಮಹಾಕಾವ್ಯಗಳಲ್ಲಿ ಮೊದಲಿಗೆ ಕಾಣುತ್ತೇವೆ. ಅಲ್ಲಿನ ಪುರಾಣದೇವತೆಗಳ ರೂಪ ಪರಿವರ್ತನದ ಅಂಶಗಳು ಅನೇಕ ಜನಪದ ಕಥೆಗಳಲ್ಲಿಯೂ ಕಾಣುತ್ತವೆ. ಉದಾ: ಮಾಟಗಾರರ ರೂಪ ಪರಿವರ್ತನ, ಮಾಟಗಾರ ಮತ್ತು ಅವನ ಶಿಷ್ಯ, ಪ್ರಾಣಿಗಳು ಮನುಷ್ಯರಾಗಿ ಪರಿವರ್ತಿತವಾಗುವ ಅನೇಕ ಕಥೆಗಳಿವೆ.

ಆಡಿಸಿಯ ಕಥೆಗಳಲ್ಲಿ ಜಾನಪದ ಕಥೆಗಳ ಅನೇಕ ಆಶಯಗಳಿವೆ. ಸರ್ಸಿ ಒಬ್ಬ ಮಾಟಗಾರ್ತಿ. ಅವಳು ತನ್ನ ಬಳಿಗೆ ಬಂದ ಮನುಷ್ಯರನ್ನು ಹಂದಿಗಳನ್ನಾಗಿ ಪರಿವರ್ತಿಸುತ್ತಿದ್ದಳು. (ಸೋಮದೇವನ ಕಥಾಸರಿತ್ಸಾಗರದಲ್ಲಿ ಬರುವ ಯಕ್ಷಿಣಿ ಈ ಮಾಟಗಾತಿಯನ್ನು ಹೋಲುತ್ತಾಳೆ) ತನ್ನ ಮಾಟದ ಕೊಳಲಿನ ಸಂಗೀತದ ಸಹಾಯದಿಂದ ಅವಳು ಮಾನವರನ್ನು ಪ್ರಾಣಿಗಳನ್ನಾಗಿ ಪರಿವರ್ತಿಸುತ್ತಿದ್ದಳು. ಒಬ್ಬ ಸಾಹಸಿ ಅವಳ ಮಾಟದ ಕೊಳಲನ್ನು ವಶಮಾಡಿಕೊಂಡು ಅವಳನ್ನು ಗೆಲ್ಲುತ್ತಾನೆ. ಹೀಗೆ ಜನಪದ ಕಥೆಯ ಅಂಶಗಳು ಪುರಾಣದಲ್ಲಿ ಸೇರಿ, ಮತ್ತೆ ಹೊಸರೂಪದಿಂದ ಜನಪದ ಕಥೆಯಲ್ಲಿ ಸೇರಿರಬಹುದಾಗಿದೆ.

ಆಡಿಸಿಯಲ್ಲಿ ಬರುವ ಒಕ್ಕಣ್ಣಿನ ರಾಕ್ಷಸ ಪಾಲಿಫೀಮಸನ ಕಥೆ ಜನಪದ ಕಥೆಯೇ. ಓಡಿಸೀಯಸ್ ಆ ರಾಕ್ಷಸನ ಕಣ್ಣನ್ನು ಸುಟ್ಟು, ಅವನನ್ನೂ ಇತರ ರಾಕ್ಷಸರನ್ನೂ ವಂಚಿಸಿ ಹೋಗುವ ಸಂದರ್ಭದ ವಿವಿಧ ರೂಪದ ಆಶಯಗಳು ಹಲವಾರು ಜನಪದ ಕಥೆಗಳಲ್ಲಿ ಕಾಣುತ್ತವೆ.

ಐತಿಹ್ಯಗಳೂ ಪುರಾಣಕಥೆಗಳೂ ಸ್ಪಷ್ಟಲಕ್ಷಣಗಳುಳ್ಳವಾಗಿ ಪ್ರತ್ಯೇಕ ವಿಭಾಗಗಳಾದರೂ ಅವು ಜಾನಪದದೊಡನೆ ಸೇರಿದ್ದು ಪರಸ್ಪರ ಪ್ರಭಾವವನ್ನು ಒಳಗೊಂಡಿರುವುದರಿಂದ ಜಾನಪದ ಹಾಗೂ ಐತಿಹ್ಯಗಳ ಸಂಬಂಧಗಳನ್ನೂ ವಿಚಾರ ಮಾಡಬೇಕಾಗುತ್ತದೆ.

ಐತಿಹ್ಯಗಳಲ್ಲಿ ಪುರಾಣ ಲಕ್ಷಣಗಳ ಕಥಾಂಶಗಳೂ ಯಕ್ಷಿಣಿ ಕಥೆಗಳ ಅಂಶಗಳೂ ಹಲವುಂಟು. ಚಿನ್ನದ ಉಣ್ಣೆಯನ್ನು ತರುವ ಸಾಹಸ ಮಾಡಿದ ಜೇಸನ್ನನೆಂಬ ವೀರ ಮಾಟಗಾತಿ ಮೀಡಿಯಾ ಕೊಟ್ಟ ಮಾಟದ ಮುಲಾಮಿನ ಸಹಾಯದಿಂದ ಅಸಾಧ್ಯಕಾರ್ಯಗಳನ್ನು ಮಾಡಿ ಅಜೇಯನಾಗುತ್ತಾನೆ. ಉಣ್ಣೆಯನ್ನು ತೂಗಹಾಕಿದ್ದ ಗಿಡವನ್ನು ಕಾಯುವ ಘಟಸರ್ಪ ನಿದ್ರಿಸುವಂತೆ ಮಾಡಿ ಅದನ್ನು ಸಂಪಾದಿಸುತ್ತಾನೆ. ಸರ್ಪ ಕಾಯುತ್ತಿದ್ದ ಹಣ್ಣನ್ನೋ ಹೆಣ್ಣನ್ನೋ ಇತರ ವಸ್ತುಗಳನ್ನೋ ತರುವ ಸಾಹಸವನ್ನು ಅನೇಕ ಜನಪದ ಕಥೆಗಳಲ್ಲಿಯೂ ಗೀತಗಳಲ್ಲಿಯೂ ಕಾಣುತ್ತೇವೆ.

	ಗ್ರೀಕರ ವೀರ ಪರ್ಸಿಯಸನ ಸಾಹಸಗಳಲ್ಲಿ ಪಾಲಿಡೆಕ್ಟಸ್ ಎಂಬ ರಾಜ ಪರ್ಸಿಯಸನ ನಾಶವಾಗಬೇಕೆಂದು ಅವನನ್ನು ಗೊರ್ಗನ್ ಮೆಡ್ಯೂಸಳ ತಲೆ ತರಲು ಕಳಿಸಿದುದು ರಾಜ (ಅಥವಾ ಇತರರು) ತನ್ನ ಪ್ರತಿಸ್ಪರ್ಧಿಯನ್ನು ತನ್ನ ದಾರಿಯಿಂದ ದೂರಮಾಡುವ ಅನೇಕ ಜನಪದ ಕಥೆಗಳ ತಂತ್ರವೇ ಆಗಿದೆ. ಗಾಳಿಯ ವೇಗದಿಂದ ಹೊತ್ತುಯ್ಯುವ ಪಾದರಕ್ಷೆಗಳನ್ನೂ ಮೆಡ್ಯೂಸಳನ್ನು ಕೊಲ್ಲುವ ಖಡ್ಗವನ್ನೂ ಹರ್ಮಿಸ್ ದೇವನಿಂದ ಪರ್ಸಿಯಸ್ ಪಡೆಯುವುದೂ ಅದೃಶ್ಯವಾಗುವ ಶಕ್ತಿಯನ್ನು ಕೊಡುವ ಕತ್ತಲೆಯ ಟೋಪಿಯನ್ನು ಗಂಧರ್ವ ಕನ್ಯೆಯರಿಂದ ಪಡೆಯುವುದೂ ನೋಡಿದವರನ್ನೂ ಕಲ್ಲುಮಾಡುವ ಮೆಡ್ಯೂಸಳನ್ನು ಕೊಲ್ಲುವಾಗ ತನ್ನ ಗುರಾಣಿಯಲ್ಲಿ ಪ್ರತಿಬಿಂಬಿಸಿದ ಅವಳ ಮೋರೆಯನ್ನು ಖಡ್ಗದಿಂದ ಛೇದಿಸಿ ಆಂಡ್ರೋಮಿಡ ಎಂಬ ಸುಂದರಿಯನ್ನು ಅವಳ ಬಂಧನದಿಂದ ಬಿಡಿಸಿ ತರುವುದೂ ಯಕ್ಷಿಣಿ ಕಥೆಗಳ ಆಶಯಗಳೇ ಆಗಿವೆ.

	ಜನಪದ ಕಥೆಗಳ ಪ್ರಸಿದ್ಧ ಸಾಹಸಗಳಲ್ಲಿ ಹರ್‍ಕ್ಯುಲಸನ ಸಾಹಸಗಳನ್ನೂ ಅನೇಕ ಮಾಟದ ವಸ್ತುಗಳನ್ನು ಸಂಪಾದಿಸಿದ ಪರ್ಸಿಯಸನ ಕಥೆಯನ್ನೂ ಸಿಸಿಫಿಸನಿಗೆ ಪಾತಾಳದಲ್ಲಿ ಆದ ಶಿಕ್ಷೆಯ ಕಥೆಯನ್ನೂ ಫಿನ್‍ಲೆಂಡಿನ ಕಾಲೇವಾಲ ಮಹಾಕಾವ್ಯದಲ್ಲಿ ಪಹಜೋಲದ ಹುಡುಗಿ ವೆನ್ನಾಮೆನನ್‍ಗೆ ತರಲು ಹೇಳಿದ ಕಾರ್ಯಗಳನ್ನೂ ಮೂರು ದಿನಗಳಲ್ಲಿ ಕೋಟೆ ಕಟ್ಟುವುದನ್ನೂ ರಾಜಕುಮಾರಿ ನಗುವಂತೆ ಮಾಡುವುದನ್ನೂ ಎತ್ತಿನ ಹಾಲನ್ನು ತರುವ ಕಾರ್ಯವನ್ನೂ ಜಾನಪದ ಮತ್ತು ಪುರಾಣ ಹಾಗೂ ಐತಿಹ್ಯ ಕೋಶ ಎಂಬ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಒಂದು ಜನಪದ ಕಥೆಯಲ್ಲಿ ಗರುಡನ ಹಾಲನ್ನು ತರಬೇಕೆಂಬ ಕಾರ್ಯವಿದೆ. ಜ್ಯೂಸ್ ದೇವ ಎಕ್ರೆಸಿಯಾಸನ ಮಗಳು ದಾನೇಯನ್ನು ಮೋಹಿಸಿ, ಚಿನ್ನದ ಮಳೆಯಾಗಿ ಅವಳನ್ನು ಕೂಡಿದ ಮೇಲೆ ಅವಳು ಪರ್ಸಿಯಸನನ್ನು ಪಡೆಯುವ ಕಥೆಗೆ ಜನಪದ ಕಥೆಗಳ ಹೋಲಿಕೆಯಿದೆ. ಹಣ್ಣನ್ನು ತಿಂದೂ ಹೂವನ್ನು ಮೂಸಿಯೂ ಮಾಟದ ವಸ್ತುವನ್ನು ಸ್ಪರ್ಶಿಸಿಯೂ ಮಕ್ಕಳನ್ನು ಹಡೆವುದಿದೆ.

	ನಮ್ಮ ಅನೇಕ ಜನಪದ ಕಥೆಗಳು ರಾಮಾಯಣ, ಮಹಾಭಾರತ, ಶ್ರೀಮದ್ ಭಾಗವತ ಮುಂತಾದ ಪ್ರಾಚೀನ ಮಹಾಕಾವ್ಯಗಳಲ್ಲಿ ಕಾಣುತ್ತವೆ. ಭೀಮನಿಗೆ ಸಂಬಂಧಿಸಿದ ಅನೇಕ ಕಥೆಗಳು, ಹಾಗೂ ರಾಮಾಯಣದ ವಾತಾಪಿ ಇಲ್ವಲ ಹಾಗೂ ಅಗಸ್ತ್ಯರ ಕಥೆಗಳು, ಕರ್ಣನನ್ನು ಹಡೆದ ಕುಂತಿ ಪೆಟ್ಟಿಗೆಯಲ್ಲಿಟ್ಟ ಅವನನ್ನು ಹೊಳೆಯಮೇಲೆ ತೇಲಿಬಿಡುವ ಕಥೆ-ಇವು ಉದಾಹರಣೆಗಳು. ಜೈನ ಭಾರತದಲ್ಲಿ ಬರುವ ಕರ್ಣ ಜನನವೃತ್ತಾಂತದಲ್ಲಿ ಯಕ್ಷಿಣಿಕಥೆಯ ಲಕ್ಷಣಗಳಿವೆ.

	ಸತ್ತವರನ್ನು ಬದುಕಿಸುವ ಸಂಜೀವಿನಿ, ಅಮೃತದ ಗಿಂಡಿ, ಮಾಟದ ಹೀಲಿ ಕುಂಚ ಇತ್ಯಾದಿಗಳ ಉಪಯೋಗ ಜನಪದ ಗೀತಕಥೆಗಳಲ್ಲಿ ಸಾಮಾನ್ಯ. ಜೈಮಿನಿ ಭಾರತದಲ್ಲಿ ಸತ್ತ ಅರ್ಜುನನನ್ನು ಬದುಕಿಸಲು ಪಾತಾಳದಿಂದ ಸಂಜೀವಿನಿಮಣಿಯನ್ನು ತರುವ ಕಥೆಂiÀi ಆಶಯವನ್ನು ಇವುಗಳಲ್ಲಿ ಗುರುತಿಸಬಹುದು.
	ಆದರೆ, ಸತ್ತ ಅಲ್ಸೆಸ್ಟಿಸಳನ್ನು ಪಾತಾಳಕ್ಕೆ ಕರೆದುಕೊಂಡು ಹೋಗುವಾಗ ಹೆರಾಕ್ಲೀಸ್ ಪಾತಾಳದವರೊಡನೆ ಹೋರಾಡಿ ಅವಳನ್ನು ತಿರುಗಿ ತರುವಂಥ ಸುಖಾಂತ ಕಥೆ ಪುರಾಣಕಥೆಗಳಲ್ಲಿದ್ದರೂ ಎಲ್ಲ ಕಥೆಗಳೂ ಸುಖಾಂತವಾಗಿರುವುದಿಲ್ಲ.

	ಪುರಾಣಗಳಲ್ಲಿ ಸೃಷ್ಟಿಯ ಕಥೆಗಳೂ ಪ್ರಳಯದ ಕಥೆಗಳೂ ಬಹಳುಂಟು. ಜಗತ್‍ಸೃಷ್ಟಿಯಾದ ವೇದಮೂಲದ ಕಥೆಗಳೂ ಗ್ರೀಕ್ ಕಥೆಗಳೂ ಪುರಾಣ ಮತ್ತು ತತ್ತ್ವಜ್ಞಾನಗಳಿಗೆ ಸೇರಿದವಾಗಿವೆ. ಸ್ಕ್ಯಾಂಡಿನೇವಿಯ ಪುರಾಣಗಳಲ್ಲಿ ಯೆಮೆರ್ (ಭೂಮಿ) ದೈತ್ಯನೊಂದಿಗೆ ಮಹಾದೇವ ದೇವತೆಗಳನ್ನೂ ದೈತ್ಯರನ್ನೂ ಸೃಷ್ಟಿಸುತ್ತಾನೆ. ಆ ಪುರಾಣದಲ್ಲಿ ಯಗ್ ದ್ರಾಸಿಲ್ ಎಂಬ ಜಗದ್‍ವೃಕ್ಷದ ಪುರಾಣಕಥೆಯಿದೆ. ವೃಕ್ಷದ ತುದಿಗೆ ಗರುಡನೂ ಕೆಳಗೆ ಬಾವಿಯನ್ನು ಕಾಯುವ ಸರ್ಪವೂ ಉಂಟು.

	ವೇದಗಳಲ್ಲಿರುವಂತೆಯೇ ಭಾರತದ ಹಲವು ಜನಪದ ಪುರಾಣಗಳಲ್ಲಿಯೂ ಮೂಲದಲ್ಲಿ ದೇವರು ನೀರಿನಿಂದ ಜಗತ್ತನ್ನು ಸೃಷ್ಟಿಸಿದ ಅನೇಕ ಕಥೆಗಳಿವೆ. ಉತ್ತರ ಅಮೆರಿಕದಲ್ಲಿ ಕಯೊಟ್ ಎಂಬ ಒಂದು ಜಾತಿಯ ನಾಯಿ ಜಗತ್ತನ್ನು ಸೃಷ್ಟಿಸುತ್ತದೆ. ಗೋಲ್ಡಕೋಸ್ಟ್‍ನಲ್ಲಿ ಜೇಡರಹುಳುವೇ ಸೃಷ್ಟಿಕರ್ತ. ಈ ಜನಾಂಗಗಳಲ್ಲಿ ಕಯೋಟ್ ಹಾಗೂ ಜೇಡರಹುಳು ತಂತ್ರಗಾರನಾಗಿರುವ ಹಲವು ಕಥೆಗಳಿವೆ.

	ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರಲ್ಲಿನ ಸುಗ್ಗಿಕುಣಿತದ ಹಾಡು ಭೂಮಿ ಹುಟ್ಟಿದ ಪರಿಯನ್ನು ಹೇಳುತ್ತದೆ.

	ಇನ್ನೊಂದು ಹಾಡಿನಲ್ಲಿ, ದೇವರೂ ಇಲ್ಲದ ಕಾಲದಲ್ಲಿ ಎಲ್ಲ ಕಡೆಗೂ ಸಮುದ್ರವೇ ಇರುವಲ್ಲಿ ಮಹಾದೇವರಾಯ ಅಮೃತದ ಹುಲ್ಲನ್ನೂ ಇತರ ವಸ್ತುಗಳನ್ನೂ ಪಡೆಯುತ್ತಾನೆ. ಬಲಭಾಗದಿಂದ ಬ್ರಹ್ಮನನ್ನೂ ಎಡಭಾಗದಿಂದ ನಾರಾಯಣನನ್ನೂ ಬಸವೇಶ್ವರನನ್ನೂ ಪಡೆಯುತ್ತಾನೆ. ಪಾರಿವಾಳ ಹಕ್ಕಿಯ ಮೊಟ್ಟೆಯಿಂದ ಜಗತ್ತನ್ನು ಸೃಷ್ಟಿಸುತ್ತಾನೆ. ವಿವರಗಳಲ್ಲಿ ವ್ಯತ್ಯಾಸಗಳಿದ್ದರೂ ಇದು ವೇದದಲ್ಲಿನ ಸೃಷ್ಟಿಯ ಕಥೆಯನ್ನು ಹೋಲುತ್ತದೆ.

	ಪುರಾಣಕಥೆಗಳನ್ನು ತಮ್ಮದೇ ಕಲ್ಪನೆಯಿಂದ ಜನಪದ ಪುರಾಣಕಥೆಗಳನ್ನಾಗಿ ಗ್ರಾಮೀಣ ಜನ ಪರಿವರ್ತಿಸಿಕೊಳ್ಳುತ್ತಾರೆ. ವೇದ-ಪುರಾಣಗಳ ಇಂದ್ರ, ಅಗ್ನಿ, ಯಮ ಇತ್ಯಾದಿ ಕೆಲವು ದೇವತೆಗಳೂ ತ್ರಿಮೂರ್ತಿಗಳೂ ಅವರ ಹೆಂಡಂದಿರೂ ದೇವತಾಸ್ತ್ರೀಯರೂ ಗಂಧರ್ವರೂ ರಾಕ್ಷಸರೂ ಭೂತ, ಪಿಶಾಚಿಗಳೂ ಜನಪದ ಪುರಾಣಗಳಲ್ಲಿದ್ದಾರೆ. ಉದಾ: ಒಕ್ಕಲಿಗರ ಹುಡುಗನೊಬ್ಬ ಸಾಹಸಮಾಡಿ, ಇಂದ್ರನ ಮಗಳನ್ನೂ ಅಗ್ನಿಯ ಮಗಳನ್ನೂ ಮಹಾಶೇಷನ ಮಗಳನ್ನೂ ಮದುವೆಯಾಗುವ ಕಥೆ.

	ಹಾಲಕ್ಕಿ ಒಕ್ಕಲಿಗರಲ್ಲಿ ಕುಂತುಮ್ಮಿಯ ಮಕ್ಕಳು ಎಂಬ ಅಪೂರ್ವವಾದ ಪುರಾಣ ಕಥೆಯಿದೆ. ಅದರಲ್ಲಿ ಸೂರ್ಯ, ಚಂದ್ರ, ಸತ್ಯನಾರಾಯಣ, ಶುಕ್ರ ಬೆಳ್ಳಿ-ಇವರು ಕುಂತಿಯ ಮಕ್ಕಳು. ಮುಟ್ಟಾಗಿ ಸಮುದ್ರ ಮೀಯಲು ಹೋದ ಗಂಗೆಯನ್ನು ಸೂರ್ಯಕತ್ತಲೆಯನ್ನುಂಟುಮಾಡಿ, ಕೂಡಿದ ಫಲವಾಗಿ ಬಿಸಿಲಿನಲ್ಲಿ ತಿರುಗಬೇಕೆಂಬ ಶಾಪವನ್ನು ತಾಯಿಯಿಂದ ಪಡೆಯುತ್ತಾನೆ.

	ಸೂರ್ಯ ಸಮುದ್ರದಲ್ಲಿ ಮುಳುಗುವಂತೆ ಕಾಣುವ ಅಂಶವನ್ನು ಇಲ್ಲಿ ಆತ ತಂಗಿ ಗಂಗೆಯೊಡನೆ ಸಂಬಂಧ ಮಾಡಿದನೆಂದು ಕೌಶಲ್ಯದಿಂದ ಹೆಣೆಯಲಾಗಿದೆ. ನೈಸರ್ಗಿಕ ಘಟನೆಗಳನ್ನು ನಿರೀಕ್ಷಿಸಿದ ಮಾನವ ಅವುಗಳಿಗೆ ಮಾನವೀಯ ಸಂಬಂಧಗಳನ್ನು ಆರೋಪಿಸಿ, ಪುರಾಣರಚನೆಯನ್ನು ಕಟ್ಟುವುದರ ಮೇಲೆ ಈ ಕಥೆ ಬೆಳಕನ್ನು ಚೆಲ್ಲುತ್ತದೆ.

	ಬ್ರಹ್ಮಹತ್ಯಾದೋಷದ ಪಾಪದ ಫಲವನ್ನು ಈಶ್ವರ ತಪ್ಪಿಸಿಕೊಳ್ಳಬೇಕಾದರೆ ಆ ಪಾಪದ ಸ್ವಲ್ಪ ಭಾಗ ಹೆಂಗಸರಿಗೆ ಸೇರಿತೆಂದೂ ಅದು ಮುಟ್ಟಿನ ಸ್ರಾವದರೂಪದಲ್ಲಿ ಕಾಣಿಸಿಕೊಳ್ಳುತ್ತದೆಯೆಂದೂ ಪುರಾಣಕಥೆಯಿದೆಯಷ್ಟೆ. ಸಮುದ್ರದಲ್ಲಿ ಮಳೆಗಾಲದ ಪ್ರಾರಂಭದಲ್ಲಿ ಮೂರುದಿನ ಬರುವ ಬಗ್ಗಡ ನೀರನ್ನು ಮುಟ್ಟಿನ ನೀರೆಂದು ಕಲ್ಪಿಸಿ, ಇದು ಅಣ್ಣನೊಡನೆ ಕೂಡಿದ ಪಾಪದ ಫಲವೆಂದು ಹಳ್ಳಿಗರು ನವೀನವಾಗಿ ಕಲ್ಪಿಸಿಕೊಂಡಿದ್ದಾರೆ.

	ರಾಮಾಯಣ ಕಥೆಯನ್ನು ಅನುಸರಿಸುವಲ್ಲಿ ನವೀನಪುರಾಣಪ್ರಜ್ಞೆಯನ್ನು ಹಳ್ಳಿಗರು ತೋರಿದ್ದಾರೆ. ಲಂಕೆಯ ಲಂಕಾದೇವಿ ಒಣಮೆಣಸಿನ ಕಾಳುಗಳನ್ನು ತಿಂದಿದ್ದರಿಂದ ಅವಳಿಗೆ ರಾವಣ, ಕುಂಭಕರ್ಣ, ಈಬೂಶೈನ (ವಿಭೀಷಣ), ದುಮ್ಮ, ದುಮ್ಮಾಕ್ಸ (ಧೂಮ್ರಾಕ್ಷ), ಅತ್ತಿಕಾಯ (ಅತಿಕಾಯ) ಮೊದಲಾದ ಏಳು ಮಂದಿ ಮಕ್ಕಳು ಹುಟ್ಟಿದರು. ರಾವಣನಿಗೆ ಸಿಕ್ಕ ಮಾವಿನಹಣ್ಣು ಹೆಣ್ಣಾಯಿತು. ಅವಳೇ ಸೀತೆ. ಅವಳಿಂದ ಅನಿಷ್ಟವೆಂದು ತಿಳಿದು, ಅವಳನ್ನು ಕಡಿದು ರಕ್ತವನ್ನು ಕೊಡುವಂತೆ ಆತ ಹೆಂಡತಿಗೆ ಹೇಳಿದ. ಅವಳು ಒಂದು ಮೊಲವನ್ನು ಕೊಂದು ಅದರ ರಕ್ತವನ್ನು ಕೊಟ್ಟಳು. ಸಮುದ್ರದಲ್ಲಿ ಬಿಟ್ಟಿದ್ದ ಸೀತೆಯ ಪೆಟ್ಟಿಗೆ ಅಂಬಿಗನಿಗೆ ಸಿಕ್ಕು ಜನಕನನ್ನು ಸೇರಿತು.

ಸೀತೆಯನ್ನು ಮದುವೆಯಾಗುವ ಪಣದಲ್ಲಿ ಭೂಮಿಯ ಭಾರದ ಬಿಲ್ಲುಬಾಣ ಎತ್ತಬೇಕು, ಕಲ್ಲಡಕೆ ಕಲ್ಲ ವೀಳ್ಯ ಮೆಲ್ಲಬೇಕು ಎಂದಿದೆ. ಆ ಪಂಥದಲ್ಲಿ ರಾವಣನ ಹಲ್ಲೇ ಮುರಿದುಹೋಗುತ್ತದೆ.

ಶಂಬುದೈತ್ಯ ಹಿಂಡಿನಲ್ಲಿ ಕೂತಿದ್ದಾಗ, ಲಕ್ಷ್ಮಣ ಆ ಹಿಂಡನ್ನು ಕಡಿದೆ. ಸತ್ತ ಆ ದೈತ್ಯನ ಹೆಂಡತಿ ಜೈತಿ (ಚಂದ್ರನಖಿ?) ರಾವಣನಿಗೆ ದೂರಿತ್ತಳು. ಇಲ್ಲಿ ಜೈನ ಭಾರತದ ಪ್ರಭಾವ ಕಾಣುತ್ತದೆ.

ಸೂರ್ಯನನ್ನು ಒಳ್ಳೆ ಬಾಳೆತೋಟವೆಂದು ಭ್ರಮಿಸಿ ಹನುಮಂತ ತಿನ್ನಲು ಹಾರಿದಾಗ ಸೂರ್ಯ ಅವನ್ನು ಕಡಿದ. ಸಮುದ್ರದಲ್ಲಿ ಬಿದ್ದ ಹನುಮಂತನ ದೇಹವನ್ನು ಮೀನುಗಳು ತಿಂದರೂ ಅವನ ದೇಹಭಾಗಗಳನ್ನು ಮರಳಿ ಪಡೆದು, ಅವನನ್ನು ಬದುಕಿಸುತ್ತಾನೆ.

ರಾವಣನ ಪಟದ ಸಂಧಿಯ ಹಾಗೂ ಲವಕುಶರ ಸಂಧಿಯ ಕಥೆ ಆನಂದ ರಾಮಾಯಣದಲ್ಲಿದ್ದುದು ಪಾಠಭೇದದಿಂದ ಜನಪದ ಹಾಡಿನಲ್ಲಿ ಬರುತ್ತದೆ. ಇಲ್ಲಿಯ ವಿಶೇಷವೆಂದರೆ ಲವಕುಶರು ರಾವಣನೊಡನೆ ಯುದ್ಧಮಾಡಿ ಅವರನ್ನು ಕೊಲ್ಲುತ್ತಾರೆ. ಇದು ಜೈನ ರಾಮಾಯಣವೊಂದರಲ್ಲಿ ಬರುತ್ತದೆ. ಹಳ್ಳಿಯ ಹಾಡಿನ ಇನ್ನೊಂದು ಕಥೆಯ ಪ್ರಕಾರ, ತುಪ್ಪದಲ್ಲಿ ಬಿದ್ದ ನೊಣವನ್ನು ತೆಗೆಯಲು ನೋಡಿದ ಸೀತೆಗೆ ಅದರಲ್ಲಿ ನಿನ್ನ ಜಾರನನ್ನು ನೋಡಿದೆ ಎಂದು ಆರೋಪಿಸಿ ರಾಮ ಅವಳನ್ನು ತ್ಯಜಿಸುತ್ತಾನೆ.

ಜನಪದ ಮಹಾಭಾರತದಲ್ಲಿ ಕಥಾವ್ಯತ್ಯಾsಸ ಇನ್ನೂ ವಿಶೇಷಾಗಿದೆ. ಒಂದು ಹಾಡಿನಲ್ಲಿ ಪರಮಾತ್ಮ ಸಂನ್ಯಾಸಿಯ ರೂಪದಿಂದ ಬಂದು, ಗಾಂಧಾರಿಗೆ ನೂರು, ಕುಂತಿಗೆ ಐದು ಅಕ್ಕಿಕಾಳು ಕೊಟ್ಟಿದ್ದರಿಂದ ಅವರಿಗೆ ಅಷ್ಟಷ್ಟು ಮಕ್ಕಳಾಗುತ್ತಾರೆ. ಇನ್ನೊಂದರಲ್ಲಿ ಪಾಂಡುರಾಜ ತಾನು ಸತ್ತಮೇಲೆ ತನ್ನ ಅವಯವಗಳನ್ನು ತಿನ್ನಲು ಹೇಳಿ ಸಾಯುತ್ತಾನೆ. ಆ ಕ್ರಮದಿಂದ ಪಾಂಡವರು ಬಹಳ ಬಲಶಾಲಿಗಳಾಗುತ್ತಾರೆ.

ಕುಮಾರವ್ಯಾಸಭಾರತದಲ್ಲಿರುವಂತೆ ತನ್ನ ತಾಯಿಯನ್ನು ಮೋಹಿಸಿದನೆಂದು ಭೀಷ್ಮನ ಮೇಲೆ ಸಂದೇಹಪಟ್ಟು ವಿಚಿತ್ರವೀರ್ಯ ಪ್ರಾಯಶ್ಚಿತ್ತಾರ್ಥವಾಗಿ ಗೊಬ್ಬರದಲ್ಲಿ ನಿಂತು ಬೆಂಕಿಯಿಂದ ಸುಡಿಸಿಕೊಳ್ಳುತ್ತಾನೆ. ಜನಪದ ಕಥೆಯಲ್ಲಿ ಆತ ಮಹಾಸತಿಯ ಹಾಗೆ ಬೆಂಕಿಯ ಕೊಂಡದಲ್ಲಿ ಬೀಳುತ್ತಾನೆ. ಆ ಕೊಂಡದಿಂದ ಪಾಂಡುರಾಯ ಹಾಗೂ ಕೌರವ (ಧೃತರಾಷ್ಟ್ರ) ಹುಟ್ಟುತ್ತಾರೆ.

ಜೈನಭಾರತದಲ್ಲಿದ್ದಂತೆಯೇ ಕೃಷ್ಣನ ಮಗಳನ್ನು ಅಭಿಮನ್ಯು ಮದುವೆಯಾಗುವ ಹಾಡುಗಳುಂಟು. ಈ ಕಥಾನಕಗಳಲ್ಲಿ ಕೃಷ್ಣನೇ ಅಭಿಮನ್ಯುವನ್ನು ಕೊಲ್ಲಿಸುತ್ತಾನೆ.
ಶಿವ-ಪಾರ್ವತಿ, ಶಿವ-ಗಂಗೆ, ಅರ್ಜುನಜೋಗೆ, ದ್ರೌಪದಿ ಕೌರವನೊಡನೆ ಜೂಜಾಡಿದ ಕಥೆ ಇತ್ಯಾದಿ ಸಹ ಜನಪದ ಹಾಡುಗಳಲ್ಲಿ ಉಂಟು.

ಜನಪದ ಐತಿಹ್ಯ: ಪುರಾಣ ಪುರುಷರಿಗೆ ಸಂಬಂಧಿಸಿದ ಸ್ಥಳಕಥೆಗಳು ಹಲವುಂಟು. ಲಕ್ಷ್ಮಣ ಬಂಡೆಗೆ ಬಾಣ ಹೊಡೆದು ಹೊಂಡ ಮಾಡಿದ್ದು ಲಕ್ಷ್ಮಣ ತೀರ್ಥವಾಯಿತು. ಪಾಂಡವರು ಹಾನಗಲ್ಲಿನಲ್ಲಿದ್ದದ್ದು, ಪರಮೇಶ್ವರ ಇಲ್ಲದಾಗ ಪಾರ್ವತಿ ಹಾಲಕ್ಕಿ ಗೊಂಬೆಯನ್ನು ಮಾಡಿದ್ದು, ಪರಮೇಶ್ವರ ಅದಕ್ಕೆ ಪ್ರಾಣವನ್ನು ಕೊಟ್ಟಿದ್ದು, ಭೀಮನಿಗೆ ಪ್ರತಿಜ್ಞೆಯ ನೆನಪಾಗಲು ದ್ರೌಪದಿಯ ಕಣ್ಣೀರಿನ ಚಿತ್ರ ಕಾಣಲು ಕೃಷ್ಣ ಈರುಳ್ಳಿಯನ್ನು ಸೃಷ್ಟಿಸಿಕೊಟ್ಟಿದ್ದು ಇತ್ಯಾದಿ ಐತಿಹ್ಯಗಳನ್ನು ನೋಡಬಹುದು. ಹಾಲಕ್ಕಿ ಜನ ಪಾಂಡವರನ್ನು ದೇವರೆಂದು ತಿಳಿದು ತಾವು ಅವರ ವಂಶದರೆಂದು ನಂಬುತ್ತಾರೆ. 

ಒಗಟುಗಳು: ಗ್ರೀಕರ ಪುರಾಣಕಥೆಗಳಲ್ಲಿ ಈಡಿಪಸನಿಗೆ ಸ್ಫಿಂಕ್ಸ್ ಒಗಟನ್ನು ಹಾಕುತ್ತದೆ: ಕೆಲವೊಮ್ಮೆ ಎರಡು ಕಾಲು, ಕೆಲವೊಮ್ಮೆ ಮೂರು, ಕೆಲವೊಮ್ಮೆ ನಾಲ್ಕು ಕಾಲುಗಳಿದ್ದು ಎಲ್ಲವನ್ನು ಪಡೆದಾಗ ದುರ್ಬಲವಾದುದಾವುದು? ಇದಕ್ಕೆ ಈಡಿಪಸ್‍ನ ಉತ್ತರ-ಮನುಷ್ಯ. ಕೂಗಿದರೆ ರಾವಣ, ಹಾರಿದರೆ ಹನುಮಂತ ಯಾವುದು? ಕಪ್ಪೆ !

ತೆಂಗಿನಕಾಯಿ ಕುರಿತಾದ ಒಗಟಿನಲ್ಲಿ ಮುಕ್ಕಣ್ಣೇಶ್ವರನ ಮೂರು ಕಣ್ಣಿನ ಭಾವವಿದೆ.

ಕೆಲವು ಪುರಾಣಕಥೆಗಳಲ್ಲಿ ಉಕ್ತವಾಗಿರುವ ಹಾಗೆ ಹೆಣ್ಣನ್ನು ಪಡೆಯುವ ವ್ಯಕ್ತಿ ಒಗಟೊಂದನ್ನು ಕಡ್ಡಾಯವಾಗಿ ಬಿಡಿಸಬೇಕಾಗಿತ್ತು.

ಗಾದೆಗಳು: ಅಂತೂ ಇಂತೂ ಕುಂತೀಮಕ್ಕಳಿಗೆ ವನವಾಸ, ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ; ನಪುಂಸಕನಿಗೆ ರಂಭೆಯೇಕೆ? ದಾನಶೂರಕರ್ಣ, ಸತ್ಯಹರಿಶ್ಚಂದ್ರ, ರಾವಣಸಂನ್ಯಾಸಿ, ಭೋಳೆಶಂಕರ ಇಂಥಲ್ಲಿ ಪುರಾಣಗಳ ಬಳಕೆ ಎದ್ದು ಕಾಣುತ್ತದೆ.

	ಪುರಾಣಗಳು ಇತರ ಜನಪದ ಕೃತಿಗಳ ಮೇಲೆ ಪರಿಣಾಮ ಬೀರುತ್ತದೆ. ಜನಪದ ವಿಷಯಗಳೂ ಪುರಾಣಕಥೆಗಳಲ್ಲಿ ಸೇರ್ಪಡೆ ಹೊಂದಿ ಮತ್ತೆ ಹೊಸ ಜನಪದ ಕೃತಿಗಳ ಅವತಾರವಾಗುತ್ತ್ತದೆ. ಪುರಾಣಕಥೆಗಳೂ ಸಂಪ್ರದಾಯಗಳೂ ಮೂಲದಲ್ಲಿ ಜಾನಪದದಲ್ಲಿಯೇ ವಿಕಾಸಹೊಂದಿ ಶಿಷ್ಟ ಸಾಹಿತ್ಯಕ್ಕೆ ಸೇರುತ್ತವೆ. ಪುರಾಣ ದೇವತೆಗಳಲ್ಲಿ ಜನರ ನಂಬಿಕೆ ಕಡಿಮೆಯಾದ ಮೇಲೆ ಪುರಾಣ ಕಥೆಯನ್ನೇ ಜನಪದ ಕಥೆಯೆಂದು ಹೇಳುವುದುಂಟು. ಕೆಲ್ಟಿಕ್ ಜನರ ಜನಪದ ಕಥೆ ಬಾಲೂರ್‍ನನ್ನು ಅವನ ಮಗಳ ಮಗ ಕೊಂದುದು ಇದಕ್ಕೊಂದು ಉದಾಹರಣೆ.							(ಎಲ್.ಆರ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ